ಭಾಷಾಕಾಲಕ್ರಮವಿಜ್ಞಾನ
ಐತಿಹಾಸಿಕ-ತೌಲನಿಕ ಭಾಷಾವಿಜ್ಞಾನದ ಒಂದು ಅಂಗ. ಭಾಷೆಗಳ ವಿವಿಧ ಘಟ್ಟಗಳ ಕಾಲ ನಿರ್ಣಯ ಮಾಡುವ ಸಂಖ್ಯಾ ಕಲನವಿಜ್ಞಾನ ವಿಧಾನ (ಗ್ಲಾಟೊಕ್ರೊನಾಲಜಿ). ಒಂದು ಪ್ರಾಚೀನ ಭಾಷೆ ಯಾವ ಕಾಲದಲ್ಲಿ ಅಸ್ತಿತ್ವದಲ್ಲಿತ್ತು, ಜ್ಞಾತಿಭಾಷೆಗಳು ಯಾವ ಕಾಲದಲ್ಲಿ ಮೂಲ ಭಾಷೆಯಿಂದ ಬೇರ್ಪಟ್ಟವು ಎಂಬ ಬಗೆಗೆ ಲೆಕ್ಕಾಚಾರ ಹಾಕಿ ಹೇಳುವುದೇ ಭಾಷಾಕಾಲಾ ಕ್ರಮವಿಜ್ಞಾನದ ಮುಖ್ಯ ಉದ್ದೇಶ. ಗ್ಲಾಟೊ-ಭಾಷೆ, ಕ್ರೊನೋಸ್-ಕಾಲ ಮತ್ತು ಲೊಗೊಸ್-ಅಧ್ಯಯನ ಎಂಬ ಗ್ರೀಕ್ ರೂಪಗಳಿಂದ ಮೈದಳೆದಿರುವ ಈ ಪದ ಭಾಷೆಯ ಕಾಲಗಣನೆಯ ಬಗೆಗೆ ಊಹಿಸುವುದನ್ನೇ ಸೂಚಿಸುತ್ತದೆ. ಕಾಲಗಣನೆಗಾಗಿ ಜ್ಞಾತಿಭಾಷೆಗಳಲ್ಲಿರುವ ಮೂಲಪದಾವಳಿಯ ಎಣಿಕೆಯನ್ನು ಭಾಷಾಕಾಲಕ್ರಮವಿಜ್ಞಾನ ಬಳಸಿಕೊಳ್ಳುತ್ತದೆ. ಅಲ್ಲದೆ ಪದಸಂಖ್ಯಾಕಲನವಿಜ್ಞಾನದ (ಲೆಕ್ಸಿಕೊ ಸ್ಟ್ಯಾಟಿಸ್ಟಿಕ್ಸ್) ಜೊತೆ ಸಂಬಂಧ ಪಡೆದಿದೆ. ಲೆಕ್ಕಾಚಾರ ಹಾಕುವ ವಿಧಾನ ಜೈವಿಕ ವಿಜ್ಞಾನಗಳಲ್ಲಿ ಬಳಸಲಾಗುವ ಕಾರ್ಬನ್-14 ಕಾಲಗಣನಾ ವಿಧಾನವನ್ನು ಹೋಲುತ್ತದೆ. ಇತರ ವ್ಶೆಜ್ಞಾನಿಕ ಕ್ಷೇತ್ರಗಳಲ್ಲಿರುವಂತೆ ಭಾಷಾಕಾಲಕ್ರಮವಿಜ್ಞಾನದಲ್ಲಿಯೂ ಕೆಲವು ಅಂಗೀಕೃತ ಭಾವನೆಗಳು, ಪ್ರಮುಖವಾಗಿ ಹೀಗಿವೆ: 1 ಎಲ್ಲ ಭಾಷೆಗಳಲ್ಲೂ 80 ರಿಂದ 200ರವರೆಗೆ ಮೂಲಪದಗಳು ಇವೆ; 2 ಮೂಲಪದಗಳು ತುಂಬ ಅಪರೂಪವಾಗಿ ಬದಲಾವಣೆಗೆ ಒಳಗಾಗುತ್ತವೆ; 3 ಮೂಲಪದಾವಳಿ ನಷ್ಟವಾಗುವ ದರ ಎಲ್ಲ ಭಾಷೆಗಳಲ್ಲೂ ಒಂದೇ ರೀತಿಯಲ್ಲಿರುತ್ತದೆ; 4 ಮೂಲಪದಾವಳಿ ಉಳಿದುಕೊಂಡು ಬರುವ ಎಲ್ಲ ಭಾಷೆಗಳಲ್ಲೂ ಒಂದು ಸ್ಥಿರಾಂಕವಾಗಿರುತ್ತದೆ. 5 ಯಾವುವೇ ಎರಡು ಜ್ಞಾತಿಭಾಷೆಗಳು ಹಂಚಿಕೊಂಡಿರುವ ಪದಗಳ ಶೇಕಡತೆಯನ್ನು ಆ ಎರಡು ಭಾಷೆಗಳು ಬೇರ್ಪಟ್ಟ ಅವಧಿಯ ನಿರ್ಧಾರಕ್ಕಾಗಿ ಬಳಸಿಕೊಳ್ಳಬಹುದು. ಭಾಷಾಕಾಲಕ್ರಮವಿಜ್ಞಾನ ವಿಧಾನದಲ್ಲಿ ಬಳಸುವ ತಂತ್ರಗಳಿವು: 1 ಎರಡು ಜ್ಞಾತಿಭಾಷೆಗಳಲ್ಲಿ ಹಂಚಿಕೆಯಾಗಿರುವ ಪದಗಳನ್ನು ಲೆಕ್ಕಹಾಕುವುದು; 2 ಮಾರಿಸ್ ಸ್ವಾಡಿಷನ ಪಟ್ಟಿಯನ್ನು ಇಲ್ಲವೆ ಕಾಲಮಾನ ಸೂತ್ರವನ್ನು (ಟೈಂ-ಡೆಪ್ತ್ ಫಾಮ್ರ್ಯುಲಾ) ಬಳಸಿ ಭಾಷೆಯ ಕಾಲಮಾನವನ್ನು ಲೆಕ್ಕಹಾಕುವುದು.

ಈ ವಿಧಾನಕ್ಕಾಗಿ ಬಳಸಬಹುದಾದ ಒಂದು ಪಟ್ಟಿಯನ್ನು ಸ್ಯಾಡಿಷ್ ಎಂಬಾತ ತಯಾರಿಸಿದ್ದಾನೆ. ಇದರ ಉಪಯೋಗದಿಂದ ಎರಡು ಜ್ಞಾತಿಭಾಷೆಗಳು ಬೇರ್ಪಟ್ಟ ಅವಧಿಯನ್ನು ಕಂಡುಕೊಳ್ಳಬಹುದು ಮತ್ತು ಎರಡು ಭಾಷೆಗಳು ಶೇಕಡಾ 70ರಷ್ಟು ಜ್ಞಾತಿಪದಾವಳಿ ಅಂಶಗಳನ್ನು ಹಂಚಿಕೊಂಡಿದ್ದಲ್ಲಿ ಆ ಭಾಷೆಗಳು 11.8 ಶತಮಾನದಷ್ಟು ಹಿಂದೆ ಬೇರ್ಪಟ್ಟಿರಬಹುದು ಎಂದು ಅಂದಾಜುಮಾಡಬಹುದು. ಇದರ ಜೊತೆಗೆ ಕಾಲಮಾನ ಸೂತ್ರವನ್ನು ಬಳಸಬಹದು. 

ಕಾಲಮಾನದ ಆಳ= t =  log c/2log r
 
ಈ ಸೂತ್ರದಲ್ಲಿ t= ಕಾಲಮಾನದ ಆಳ (ಟೈಮ್ ಡೆಪ್ತ್) c= ಜ್ಞಾತಿಪದಗಳ ಪ್ರತಿಶತ ಅಂಕೆ (ಪರ್ಸಂಟೇಜ್ ಕಾಗ್‍ನೇಟ್ಸ್ ) r=ಬದಲಾವಣೆಯ ದರ (ರೇಟ್ ಆಫ್ ಚೇಂಜ್).

ಇಕ್ಸಾಟೆಕ್ ಮತ್ತು ಮೋಸಟಿಕ್ ಎಂಬ ಜ್ಞಾತಿಭಾಷೆಗಳು ಶೇಕಡಾ 74ರಷ್ಟು ಮೂಲ ಪದಾವಳಿ ಅಂಶಗಳನ್ನು ಹಂಚಿಕೊಂಡಿರುವುದಾಗಿ ಈ ವಿಧಾನ ಸಿದ್ಧಪಡಿಸಿದೆ. ಈ ಎರಡು ಭಾಷೆಗಳಿಗೆ ಸಂಬಂಧಪಟ್ಟಂತೆ ಪಟ್ಟಿಮಾಡಿದ ಒಟ್ಟು ಮೂಲಪದಗಳ ಸಂಖ್ಯೆ 192 ಆಗಿತ್ತು. ಮೇಲಿನ ಸೂತ್ರವನ್ನು ಬಳಸಿ ಕಾಲಮಾನ 2200 ವರ್ಷಗಳೆಂದು ಲೆಕ್ಕಹಾಕಲಾಯಿತು. ಬೇರೆ ಯಾವುವೇ ವೈಜ್ಞಾನಿಕ ಸಿದ್ಧಾಂತಗಳಂತೆ ಭಾಷಾಕಾಲಕ್ರಮವಿಜ್ಞಾನ ವಿಧಾನದಲ್ಲಿಯೂ ಕೆಲವು ಸಮಸ್ಯೆಗಳಿವೆ. ಕೆಲವು ಮಂದಿ ಮೂಲಪದಾವಳಿ ಅಂಶಗಳನ್ನು ನಿರ್ಧರಿಸುವ ವಿಧಾನವನ್ನು ಪ್ರಶ್ನಿಸುತ್ತಾರೆ. ಭಾಷೆಗಳಲ್ಲಿ ಕಂಡುಬರುವ ವ್ಯತ್ಯಯಗಳಿಂದಾಗಿ ಭಾಷೆಗಳಲ್ಲಿ ಮೂಲಪದಾವಳಿ ಅಂಶಗಳನ್ನು ಗುರುತಿಸಲು ಸ್ಪಷ್ಟ ಆಧಾರಗಳಿವೆಯೆ ಎಂಬುದು ಅವರ ಸಂದೇಹ, ಹಾಗೆಯೇ ಮೂಲಪದಾವಳಿ ಅಂಶಗಳ ಪಲ್ಲಟದ ದರ ಸ್ಥಿರ ಎಂಬ ಅಂಗೀಕೃತ ಭಾವನೆ ಸಹ ಪ್ರಶ್ನಾರ್ಹವಾಗಿದೆ. 			
	(ಸಿ.ಎಸ್.ಎಚ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ